ಹಾಸ್ಯ ಲೇಖನಕ್ಕೆ ಮತ್ತೊಂದು ಹೆಸರು.....

ಒಂದು ಹಳ್ಳಿ, ಸೋಮಾರಿಗಳ ಒಂದು ಟೀಮ್, ಸಿದ್ದ, ಸೀನ, ಯಂಕ,ನಾಗ,ನಿಂಗ,ಸುಬ್ಬ. ಇವರ ಜೊತೆಗೆ ಹಳ್ಳಿಯೋರು ಸೇರ್ಕಂತಾ ಇರ್ತಾರೆ. ಇವರು ಕೂತಲ್ಲೇ ಎಲ್ಲಾ ಸಿಗಬೇಕು ಎನ್ನುವವರು. ಇವರಿಗೆ ರಾಜ್ಯದ, ದೇಶದ ರಾಜಕೀಯ ಬೇಕು. ಮನೆಗಳ ವಿಷಯ ಬೇಕು. ಗಲಾಟೆಯಾದ್ರೆ ತೀರ್ಮಾನ ಮಾಡಕ್ಕೆ ಹೋಗ್ತಾರೆ. ವ್ಯಕ್ತಿಗತ ಯಾರೂ ಕೆಟ್ಟೋರಲ್ಲ. ಆದ್ರೆ ತಾವೇ ಗ್ರೇಟ್ ಎನ್ನುವಂತಹ ವ್ಯಕ್ತಿತ್ವ. ಇವರು ಒಂದು ತರಾ ಮುಖಂಡರುಗಳೇ. ಇವರ ತರಲೆ ಏನಿರುತ್ತೆ ಬನ್ನಿ ನೋಡೋಣ...............

Tuesday, April 17, 2012

ಕನ್ನಡದ ಕೋಟ್ಯಾಧಿಪತಿ......................with ಪುನೀತ್ ರಾಜ್

ಬೆಳಗ್ಗೆ ಎಲ್ಲಾ ಕೆರೆತಾವ ಕಾರ್ಯ ಮುಗಿಸಿ, ನಿಂಗನ ಚಾ ಅಂಗಡಿ ತಾವ ಸೇರಿದ್ವಿ, ಅದೇ ಡಿಕಾಕ್ಸನ್ ಲೆಸ್, ಸುಗರ್ ಲೆಸ್, ಪ್ಲಾಸ್ಟಿಕ್ ಲೋಟ ಚಾ ಕುಡಿತಾ ಕುಂತಿದ್ವಿ. ಕಿಸ್ನನ್ನ ಕೈ ನಡಗೋದು, ಯಾಕ್ಲಾ, ನಿನ್ನೆ ನಸೆ ಇಳಿದಿಲ್ಲ ಕಲಾ. ಏಥೂ. ಆಟೊತ್ತಿಗೆ ನಮ್ಮೂರ ಯಜಮಾನ, ಹಿರಿಯ ಗೌಡಪ್ಪ ಹಣೆಗೆ ಬಸವಣ್ಣನ ತರಾ ಮೂರು ಪಟ್ಟಿ ಹೊಡ್ಕಂಡ ಬಂದ. ಬತ್ತಿದಾಗನೇ ಚೆರಂಡ್ಯಾಗೆ ಕಾಲು ಮಡಗಿದ್ದ. ಯಾಕ್ರೀ ಅಂದ ಸುಬ್ಬ, ಅಯ್ಯೋ ನನ್ನ ಕನ್ನಡಕ ಹಾಕೋ ಬದಲು ನಮ್ಮವ್ವ ಅಂದು ಹಾಕಿದ್ದೇ, ಹಿಂಗಾಯ್ತು ಅಂದು, ಪಂಚೆನಾ ತೊಡೆ ಗಂಟ ಎತ್ಕಂಡು ಕಾಲು ತೊಳಕಂಡ.
 ಏನ್ರಲಾ ಇಸ್ಯಾ ಅಂದ ಗೌಡಪ್ಪ. ನೋಡ್ರೀ ಗೌಡ್ರೆ, ಯಾವ ಕೆಲಸನೂ ಮಾಡದೆ, ಅಂಗೇ ಒಂದು ಕೋಟಿ ರೂಪಾಯಿ ದುಡಿಬೋದು ಕಣ್ರೀ ಅಂದ ಸುಬ್ಬ. ಪ್ಲೇ ವಿನ್ನಾ, ಅದು ಮುಚ್ಚು ಹೋಗೈತೆ, ಮೈಸೂರು ಲಕ್ಸ್ಮಿ ಲಾಟರಿನಾ, ಅಲ್ಲಾರೀ, ಮತ್ತೆ ರಾಜಕೀಯನಾ ಅಂದ ಗೌಡಪ್ಪ. ಅಲ್ಲಾರೀ ಕನ್ನಡದ ಕೋಟ್ಯಾಧಿಪತಿ ಅಂತಾ ಒಂದು ಕಾರ್ಯಕ್ರಮ ಐತೆ ಅದ್ರಾಗೆ ಅವರು ಕೇಳೋ 15 ಪ್ರಸ್ನೆಗೆ ಉತ್ತರ ಹೇಳಿದರೆ 1ಕೋಟಿ ಬತ್ತದೆ. ಅಂಗೇ ಟಿವಿಲ್ಲೂ ಫೇಮಸ್ ಆಗಬೋದು ಅಂದ ತಂತಿ ಪಕಡು ಸೀತು. ಹೌದೇನ್ರಲಾ ಅಂದು ಹೋದೋನು. ಬಡ್ಡೆಐದ ಯಾವಾಗ ನೋಡಿದ್ರೂ ಅದೇ ಚಾನಲ್ ಹಾಕಿರುತ್ತಿದ್ದ. ಅವನು ಹೆಂಡ್ರು ಧಾರವಾಹಿ ನೋಡಬೇಕು ಅಂದ್ರೆ ಪಕ್ಕದ ಮನೆ ರಾಜಮ್ಮನ ಮನೆಗೆ ಹೋಗೋದು. ಪಕ್ಕದ ಮನೆ ರಾಜಮ್ಮ ಮುಂಡೇವಕ್ಕೆ ದರಿದ್ರ ಅನ್ನೋದು.
ಕಡೆಗೂ ಗೌಡಪ್ಪ ಸೆಲೆಕ್ಟ್ ಆದ. ರಾಜ್ ಕುಮಾರ್ ನಟಿಸಿರೋ ಮೂರು ಚಿತ್ರಗಳನ್ನು ಹೇಳಿ ಅಂತಾ ಪ್ರಸ್ನೆ ಕೇಳಿದ್ರಂತೆ. ಅದಕ್ಕೆ ಇವನು ಜೋಗಿ, ಅಪ್ಪು, ಮೈಲಾರಿ ಅಂತಾ ಕಳಿಸಿದ್ದ. ಮಗಂದು ಕಂಪೂಟರ್ ಮಿಸ್ಟೇಕ್ ಆಗಿ ಸೆಲೆಕ್ಟ್ ಆಗಿದ್ದ.
ಸರಿ ಎಲ್ಲಾ ಗೌಡಪ್ಪನ ಜೊತೆ ಕಾರ್ಯಕ್ರಮಕ್ಕೆ ಹೋದ್ವಿ,
ಪುನೀತ್ : ಗೌಡ್ರೆ, ನೀವು ಹಾಟ್ ಸೀಟಲ್ಲಿ ಇದೀರಾ ನಿಮಗೆ ಹೇಗೆ ಅನ್ಸುತ್ತೆ
ಗೌಡ : ಮತ್ತೆ ತಣ್ಣಗೈತೆ
ಪುನೀತ್ : ಅಯ್ಯೋ ಲೇ ನಿನ್ನ ಮಕ್ಕೆ, ಇಲ್ಲಿ ಎ.ಸಿ ಐತೆ. ಹಂಗಾಗಿ ತಣ್ಣಗೆ ಐತೆ;. ಕೆಳಗೆ ಕೆಂಡ ಹಾಕಬೇಕ. ಕಂಪೂಟರ್ ನೋಡಲೇ......
ಈಗ ನಿಮಗೆ ಮೊದಲನೆ ಪ್ರಸ್ನೆ, ಬೆಳಗ್ಗೆ ಕೆರೆತಾವ ಹೋಗಬೇಕಾದ್ರೆ ಚೊಂಬನ್ನ ಯಾವ ಕೈಯಲ್ಲಿ ಹಿಡಿದುಕೊಂಡಿರುತ್ತೀರಿ.
ಗೌಡಪ್ಪ : ಇದೊಳ್ಳೆ ಕತೆ ಆಯ್ತಲ್ಲಪ್ಪಾ, ಸಾ ಬಲಗೈನಾಗೆ ಬೀಡಿ, ಎಡಗೈನಾಗೆ ಚೊಂಬು ಸಾ. ಆದ್ರೂ ಡೌಟ್ ಐತೆ. ಆಡಿಯನ್ಸ್ ಪೋಲ್ ಸಾ.
ಪುನೀತ್ : ಓಕೆ ಆಡಿಯನ್ಸ್ ಸ್ಟಾರ್ಟ್
ಯಾರೂ ಏನೂ ಒತ್ತೇ ಇರಲಿಲ್ಲ. ಯಾಕೆ. ಈ ನನ್ಮಗ ಕೆರೆತಾವ ಹೋಗೋದನ್ನ ನಾವೇನಾದ್ರೂ ನೋಡಿದ್ವಾ ಅಂದ್ರು.
ಗೌಡಪ್ಪ : ಹೋಗ್ಲಿ ಬುಡಿ, ಸಾ ಎಡಗೈನಾಗೆ.
ಪುನೀತ್ : ಓಹ್ ರೈಟ್ ಆನ್ಸರ್, ಒಂದು ಸಾವಿರ ಗೆದ್ದಿದೀರಾ. ಈಗ ಮತ್ತೊಂದು ಪ್ರಶ್ನೆ.
ನಿಮ್ಮೂರು ಮಹಿಳಾ ಅಧ್ಯಕ್ಸೆ ಬಸಮ್ಮ, ನಿಮಗೆ ಯಾವಾಗ ಐ ಲವ್ ಯು ಅಂದಿದ್ದು
ಗೌಡಪ್ಪ : ಸಾ ನಮ್ಮ ಸೀನಪ್ಪನ ಹೆಣದ ಜೊತೆ ಮಸಾನಕ್ಕೆ ಹೋಗೋಬೇಕಾದ್ರೆ ಹೇಳಿದ್ದು ಸಾ
ಪುನೀತ್ : ಓಹ್ ರೈಟ್ ಆನ್ಸರ್, ಈಗ 3ಸಾವಿರಕ್ಕೆ
ನಿಮಗೆ ಎಷ್ಟು ಜನ ಹೆಂಡಂದಿರು
ಗೌಡಪ್ಪ : ಸಾ ಇದಕ್ಕೆ ಪೋನ್ ಆರ್ ಫ್ರೆಂಡ್ ಆಪ್ಸನ್ ಬೇಕು. ಸರಿ, ಲೇ ನನಗೆ ಎಷ್ಟು ಜನಾ ಹೆಂಡ್ರು ಹೇಳೇ ಚನ್ನಿ.  ಅಯ್ಯೋ ಲೇ ನಿನ್ನ ಮಕ್ಕೆ ದೋಸೆ ಹುಯ್ಯಾ, ನೀನು ಯಾವ ಬೀದಿಗೆ ಹೋದ್ರೂ ಮಕ್ಕಳು ಅಪ್ಪಾ ಅಂತಾವೆ. ನಂಗೇನ್ಲಾ ಗೊತ್ತು. ಸಾ ಒಂದು 10ಜನ
ಪುನೀತ್ : ಆರ್ ಯು ಸೂರ್. ಹೌದು ಸಾ. ಓಹ್ ರೈಟ್ ಆನ್ಸರ್
ಈಗ ನಾಲ್ಕನೇ ಪ್ರಸ್ನೆ. ನಿಮ್ಮಪ್ಪ ಯಾವ ಖಾಯಿಲೆಯಿಂದ ಸತ್ತಿದ್ದು
ಗೌಡಪ್ಪ : ಸಾ ಅವನಿಗೆ ಸುಗರ್ ಇತ್ತು, ಬಿಪಿ, ದಮ್ಮು, ಗ್ಯಾಂಗ್ರೀನ್ ಎಲ್ಲಾ ಇತ್ತು. ಆದರೆ ಸತ್ತಿದ್ದು ಉಸಿರಾಟ ನಿಂತಿದ್ದಿಂದ ಸಾ
ಪುನೀತ್ : ಓಹ್ ರೈಟ್ ಆನ್ಸರ್, ಈಗ ನಾಲ್ಕು ಸಾವಿರಕ್ಕೆ
ಡಾ.ರಾಜ್ ಕುಮಾರ್ ಯಾವ ಚಿತ್ರದಲ್ಲಿ ಕಳ್ಳನಾಗಿ ಅಭಿನಯಿದ್ದಾರೆ.
ಗೌಡಪ್ಪ : ಯಾರು ಸಾ ಈ ರಾಜ್ ಕುಮಾರ್, ಅಯ್ಯೋ ಲೇ ನಿನ್ನ ಮಕ್ಕೆ, ನಮ್ಮಪ್ಪ ಕಣೋ, ಸಾ ಇವರು ದಾರಿ ತಪ್ಪಿದ ಮಗದಲ್ಲಿ ಕಳ್ಳನಾಗಿ ಪಾಲ್ಟು ಮಾಡಿದ್ದಾರೆ.
ಪುನೀತ್ : ಈಗ ನೀನು ದಾರಿ ತಪ್ಪಿದ ಮಗಾ ಆಗಿದೆಯಾ, ಹಾಟ್ ಸೀಟ್ ನಿಂದ ಕೋಲ್ಡ್ ಸೀಟ್^ಗೆ ಗೌಡಪ್ಪ ಹೋಗ್ತಿದಾರೆ, ಧನ್ಯವಾದಗಳು. ತಬ್ಕಳೋದು ಏನು ಬೇಡ. ರೈಟು ಹೇಳು.
ನಮ್ಮ ಗೌಡಪ್ಪ ನಿರಾಸೆಯಾಗಿ ವಾಪಸ್ಸು ಬಂದ. ಬಡ್ಡಿ ಮಗಂದು ಉದಯರಂಗ ಬಸ್ಸಿಗೂ ಕಾಸು ಗಿಟ್ಟಲಿಲ್ಲ. ಈಗ ದಿನಾ ರಾಜ್ ಕುಮಾರ್ ಪಿಚ್ಚರ್ ನೋಡ್ತಾವ್ನೆ, ಮಾತೆತ್ತಿದರೆ ಆಡಿಸಿ ನೋಡು ಬೀಳಿಸಿ ನೋಡು ಅಂತಾವ್ನೆ. ಪಾಪ ಮೆಂಟಲ್ ಆಗವ್ನೆ ಅಂತಾರೆ ಜನ. ಆದ್ರೆ ನಾವು ಮಾತ್ರ, ಮತ್ತೊಮ್ಮೆ ನಮ್ಮ ಗೌಡಪ್ಪ ಹಾಟ್ ಸೀಟಲ್ಲಿ ಕೂರಬೇಕು ಅನ್ನೋದೆ ಆಸೆ. ಏನಂತೀರಾ.................



Saturday, March 31, 2012

ರಾಮ ರಾಮ ರಾಜರಾಮ

ಬೆಳಗ್ಗೆನೇ ಗೌಡಪ್ಪನ ಮನೆ ತಾವ, ನಾನು, ಸುಬ್ಬ, ನಿಂಗ ಎಲ್ಲಾ ಹೋದ್ವಿ. ಯಾಕೋ ಗೌಡಪ್ಪ ಬರೀ ಚೆಡ್ಯಾಗೆ ಮನೆ ಮುಂದೆ ಕಟ್ಟೆ ಮ್ಯಾಕೆ ಮಕ್ಕೊಂಡಿದ್ದ. ಏನ್ರೀ ಗೌಡ್ರೆ ಬರೀ ಚೆಡ್ಡಿ ಮಾಕ್ಯೆ ಮಕ್ಕೊಂಡಿದ್ದೀರಲ್ಲಾ, ಅದೂ ಬರೀ ಕಲ್ಲು ಮೇಲೆ ಅಂದ ಸುಬ್ಬ. ಲೇ ಎಲ್ಲಲಾ ನನ್ನ ಹಾಸಿಗೆ, ಪಂಚೆ ಅಂದ ಗೌಡಪ್ಪ. ನೋಡಿದ್ರೆ ರಾತ್ರಿ ಸಾನೇ ಟೈಟಾಗಿ ಮಕ್ಕೊಂಡಾವ್ನೆ, ಬಡ್ಡೆಐದ ಭಿಕ್ಸುಕ ಯೆರ್ರಿಮಲೈ ಚೆಡ್ಡಿ ಒಂದು ಬಿಟ್ಟು ಎಲ್ಲಾ ಹೊಡಕಂಡು ಹೋಗಿದ್ದ.  ಸರಿ ಬುಡಿ, ಏನ್ರಲಾ ಬಂದಿದ್ದು ಅಂದ ಗೌಡಪ್ಪ. ಏನಿಲ್ಲಾ ಗೌಡ್ರೆ ಇವತ್ತು ರಾಮನವಮಿ ಐತೆ, ಹಂಗಾಗಿ ರಾಮನ ಗುಡಿಗೆ ಹೋಗಿ ಪೂಜೆ ಮಾಡಿಸ್ಕಂಡು ಬರುವಾ ಅಂತಾ ಅಂದ ನಿಂಗ. ನೋಡ್ರಲಾ ನಾನು ಕಟ್ಟಾ ರಾಮನ ಅಭಿಮಾನಿ, ಅದೂ ಅಲ್ಲದೆ ಬಿಜೆಪಿ ಕಾರ್ಯಕರ್ತ ಬರ್ತೀನಿ ತಡೀರ್ಲಾ ಅಂದು ಸ್ನಾನ ಮಾಡದೆ ಅಂಗೇ ಪಂಚೆ ಹಾಕ್ಕಂಡು ಬಂದ ಗೌಡಪ್ಪ. ಅಲ್ರೀ ಸಾನ ಮಾಡಕ್ಕಿಲ್ವಾ ಅಂದ ಕಿಸ್ನ. ನೋಡ್ಲಾ ಹೋದವಾರ ಸಾನ ಮಾಡೀವ್ನಿ. ಇದೂ ಇನ್ನು ಒಂದು ವಾರ ವಾಲಿಡಿಟಿ ಇತ್ತದೆ. ಬೇಕಾದ್ರೆ ವಾಸ್ನೆಯಾ ನೋಡ್ಲಾ ಅಂದು ಕಂಕುಳನ್ನು ಕಿಸ್ನಂಗೆ ಹಿಡ್ದ. ಮಗಾ ಕಿಸ್ನ ಅಲ್ಲೇ ಫಿಟ್ಸ್ ಬಂದಿರೋ ತರಾ ಕಿಸ್ಕಂಡಿದ್ದ. ಯಾಕ್ಲಾ, ಇದು ವಾಷ್ನೆ ಅಲ್ಲ ಕಲಾ. ಅನಿಸ್ತೀಷಿಯಾ ಕಲಾ ಅಂದ ಕಿಸ್ನ.
ಸರಿ ಎಲ್ಲಾ ದೇವಸ್ಥಾನದ ಕಡೆಗೆ ಹೊಂಟ್ಬಿ. ನಮ್ಮನ್ನ ನೋಡಿದ ಜನ, ಈ ಮುಂಡೇ ಮಕ್ಕಳು ದೇವಸ್ಥಾನಕ್ಕೆ ಹೋಯ್ತಾರೆ ಅಂದ್ರೆ ಊರಿಗೆ ಏನೋ ಗ್ರಹಸಾರ ಕಾದೈತೆ ಅನ್ನೋವು. ನಮ್ಮನ್ನು ನೋಡ್ತಿದ್ದಾಗೆನೇ ಪೂಜಾರಪ್ಪ ತೀರ್ಥ, ಪ್ರಸಾದ ನಾಯಿಗೆ ಬನ್ನು ಎಸೆದಂಗೆ ಎಸ್ದ. ಯಾಕ್ರೀ, ಮತ್ತೆ ನಿಮ್ಮ ಬಾಯಿಗೆ ಹಾಕಬೇಕಿತ್ತಾ ಅಂದಾ ಪೂಜಾರಪ್ಪ.
ಅಟೊತ್ತಿಗೆ ಗೌಡಪ್ಪ ಇದ್ದೋನು, ನೋಡ್ರಲಾ ಪುಕ್ಸಟ್ಟೆ ಪಾನಕ ಕುಡಿಬೇಕು ಅಂದ್ರೆ ರಾಮನ ಪೋಟೋ ಮಡಿಕ್ಕಂಡು ಊರ್ನಾಗೆ ಹೋಗುವಾ ಅಂದು ಮನ್ಯಾಗೆ ಅಯೋಧ್ಯೆ ರಾಮನ ಪೋಟೋ ತಂದ. ಅದ್ರಾಗೆ ಅಡ್ವಾಣಿ, ಯಡೂರಪ್ಪ ಎಲ್ಲಾ ಇದ್ರು. ಸರಿ ಭಜನೆ ಮಾಡ್ಕಂಡು ಹೊಂಟ್ವಿ. ನಮ್ಮ ಗೌಡಪ್ಪನ ಕಾಲಿಗೆ ಹೆಂಗಸರು ನಮಸ್ಕಾರ ಮಾಡಿದ್ದೇ ಮಾಡಿದ್ದು. ನಾವು ಪಾನಕ, ಕೋಸಂಬರಿ ಏರಿಸಿದ್ದೇ ಏರಿಸಿದ್ದು. ಸರಿ ಮಹಿಳಾ ಅಧ್ಯಕ್ಸೆ ಬಸಮ್ಮನ ಮನೆಗೆ ಹೋದ್ವಿ. ಯಾಕೋ ಪಾನಕ ಹುಳಿ ಇತ್ತು. ಯಾಕವ್ವಾ ಅಂದ ಸುಬ್ಬ. ಅದನ್ನ ಸಾರಾಯಿ ಮಾಡಕ್ಕೆ ಅಂತಾ ಮಡಗಿದ್ದೆ. ಮುಂಡೇ ಮಕ್ಕಳ ನೀವು ಬಂದ್ರಲ್ಲಾ ಅದಕ್ಕೆ ಅದರಲ್ಲೇ ಪಾನಕ ಮಾಡಿ ಕೊಟ್ಟೆ ಅಂತು. ಮಗಂದು ಅದು ಕುಡಿದ ಮ್ಯಾಕೆ ಕಾಲು ಎಂಗೆಂಗೋ ಹೋಗೋದು. ಗೌಡಪ್ಪ ಎರಡು ಕಿತಾ ಚೆರಂಡ್ಯಾಗೆ ಕಾಲು ಮಡಗಿದ್ದ. ನಮಸ್ಕಾರ ಮಾಡಕ್ಕೆ ಬಂದೋರು, ಏನು ಸೌಚಾಲಯದ ವಾಸ್ನ ಬತ್ತದಲ್ಲಾ ಅನ್ನೋವು. ಇಲ್ಲಾ ಎಲ್ಲಾ ಕಡೆ ಕಾಲು ತೊಳೆದು, ತೊಳೆದು ಪಾಚಿ ಕಟ್ಟಿ ಹಿಂಗೆ ವಾಸ್ನೆ ಬತ್ತಾ ಐತೆ ಅಂದ ಸುಬ್ಬ.
ಎಲ್ಲಾರೂ ನಶೆಯಲ್ಲಿ ಇದ್ವಿ. ಎಲ್ಲರ ಮನೆಯಲ್ಲೂ ಪಾನಕ ಕುಡಿಯೋದು, ಕೋಸಂಬರಿ ಸೆಳೆಯೋದು, ಕೆಲವರು ಅರ್ಜೆಂಟಿಗೆ ಕೋಸಂಬರಿ ಮಾಡಿದ್ರು, ನಶೆಲಿ ತಿಂದಿದ್ದೇ ತಿಂದಿದ್ದು. ನಮ್ಮ ರಾಮ ಯಾತ್ರೆ ಮಧ್ಯಾಹ್ನ 4ಕ್ಕೆ ಮುಗೀತು. ಸರಿ ಎಲ್ಲಾ ಮನೆಗೆ ಹೋದ್ರೆ ಯಾರಿಗೂ ಊಟನೇ ಸೇರ್ತಾ ಇಲ್ಲ. ಮುಂಡೇಮಗಂದು 10ಲೀ ಪಾನಕ ಹೊಟ್ಟೇಲಿ ಇತ್ತು.
ರಾತ್ರಿ ಆದ್ ಮ್ಯಾಕೆ ಸುರುವಾತು ನೋಡಿ. ಮಗಂದು ಹೊಟ್ಟೆ ಎಲ್ಲಾ ಗೊಡಗೊಡ ಅನ್ನೋದು. ರಾತ್ರಿ ಕೆರೆತಾವ ಹೋದ್ರೆ ಎಲ್ಲೆಲ್ಲೋ ಹೊಗೆ ಕಾಣೋದು. ಬಡ್ಡೆಐಕ್ಳು ಎಲ್ಲಾ ನಮ್ಮ ಫ್ರೆಂಡ್ಸೇ. ಬಾಡೀಲಿ ಇರೋ ನೀರೆಲ್ಲಾ ಖಾಲಿಯಾಗಿ, ಮನೇಲೆ ಕಿಸ್ಕಂಡಿದ್ದಾತು. ಬೆಳಗ್ಗೆ ಗೌಡಪ್ಪನ ಮನೆ ತಾವ ಹೋದ್ರೆ, ಗೌಡಪ್ಪ ಹೊಟ್ಟೆಮ್ಯಾಕೆ ಸಣ್ಣ ಲೋಟ ಮಡಗಿದ್ದ. ಯಾಕ್ರೀ ಗೌಡ್ರೆ ಅಂದ ಸುಬ್ಬ. ಲೆ ಬಟ್ಟಿ ಜಾರೈತೆ ಕಲಾ. ಹೊಟ್ಟೆಲ್ಲಿ ಇರೋ ಎಲ್ಲಾ ಪಾಲ್ಟು ಹೋಗೈತೆ. ಇನ್ಮುಂದೆ ರಾಮನವಮಿ ಅಂದ್ರೆ ಸುಮ್ಕೆ ಮನ್ಯಾಗೆ ನಮಸ್ಕಾರ ಮಾಡುವಾ ಅಂದ ಗೌಡಪ್ಪ. ಕಿಸ್ನಾ ಮಾತ್ರ ಲೇ ಬಸಮ್ಮನ ಮನೆ ಪಾನಕ ಸಂದಾಗಿತ್ತು ಕಲಾ ಅಂತಿದ್ದ.

Friday, March 16, 2012

ಲೇ ಏಳ್ಲಾ ಮ್ಯಾಕೆ

ಲೇ ನಿನ್ನ ಮಗ, ಯಾಕ್ಲಾ ಹಳೇ ಬೇವರ್ಸಿ ತರಾ ಮಲಗಿದಾನೆ, ಕ್ಯಾಮೆ ಇಲ್ವೇನ್ಲಾ ಅಂದಾ ಗೌಡಪ್ಪ.
-
ಅದಲ್ಲ ಕಲಾ. ಬಡ್ಡೆಐದ ಯಾವುದೋ ಹುಡುಗಿ ಪಿರುತಿ ಮಾಡವ್ನೆ, ಬೇಡ ಕಲಾ ಅಂದಿದ್ದಕ್ಕೆ ಸಾನೇ ಕುಡಿದು ಹಿಂಗೆ ಹಳೇ ಅಂಬಾಸಿಡರ್ ಕಾರ್ ಆದಂಗೆ ಆಗವ್ನೆ. ನಾನು ಒಂದು ಹುಡುಗಿ ನೋಡಿದ್ದೆ. ಅದು ಕಪ್ಪಗೆ, ದಪ್ಪಗೆ, ಕುಳ್ಳಗೆ ಒಳ್ಳೆ ಹೋರಿಕರ ಇದ್ದಂಗೆ ಇತ್ತು. ಅದನ್ನ ಮದುವೆ ಆಗ್ಲಾ ಅಂದ್ರೆ, ಯಾವುದೋ 1967 ಮಾಡೆಲ್ ಟಾಟಾ ಗಾಡಿ ಮದುವೆ ಆಯ್ತೀನಿ ಅಂತಾನೆ ಏನ್ಲಾ ಮಾಡೋದು ಅಂದ ದೋಬಿ ರಂಗ.
-
ನೋಡ್ಲಾ ಈ ಮುಂಡೇ ಮಗ ಕುಡಿಯೋ ರೇಂಜ್ ನೋಡಿದ್ರೆ, ಈಗಾಗಲೆ ಕರುಳು ಹೊಗೆ ಹಾಕಿಸ್ಕಂಡಂಗೆ ಐತೆ. ಮನೆ ಮುಂದೆ ಹೊಗೆ ಗ್ಯಾರಂಟಿಯಾ, ಮತ್ತೆ ಅದನ್ನೇ ಕಟ್ಲಾ ಅಂದ ಗೌಡಪ್ಪ.
-
ಅಂಗೆ ಮಾಡಕ್ಕೆ ಬರಕ್ಕಿಲ್ಲ ಕನಾ. ಯಾಕೇ ಅಂತೀಯಾ. ಅವಳ ಗಂಡ ಇನ್ನೂ ಇದಾನೆ ಕನಾ
-
ಹಂಗಾದ್ರೆ ಒಂದು ಕೆಲಸ ಮಾಡು, ನಿನ್ನ ಮಗ ಏನು ಓದವ್ನೆ. ಹಂಗಂದ್ರೆ ಏನ್ಲಾ. ಏಥೂ. ಎಷ್ಟನೇ ಕಿಲಾಸು. ಹೆಬ್ಬೆಟ್ಟು ಕಲಾ ಅಂದ ದೋಬಿ ರಂಗ.
-
ಹಂಗಾದ್ರೆ ಅದಕ್ಕೆ ಮದುವೆ ಮಾಡು. ಅದು ಸತ್ತ ಮ್ಯಾಕೆ ನಮ್ಮ ಸಿದ್ದೇಸ ಮಠದಾಗೆ ಸ್ವಾಮಿ ಇಲ್ಲಾ. ಅಲ್ಲಿಗೆ ಸೇರಿಸುವಂತೆ. ಆಮ್ಯಾಕೆ ಕರಿ ಹೋರಿಕರಕ್ಕೆ ಮದುವೆ ಮಾಡಿದ್ರೆ ಆಯ್ತು ಕಲಾ. ಈಗ ಆಸ್ಪತ್ರಗೆ ಒಯ್ಯುವ ನಡಿಲಾ. ಇಲ್ಲಾಂದ್ರೆ ಮುಂಡೇ ಮಗ ಇಲ್ಲೇ ಹೊಗೆ ಹಾಕಿಸ್ಕಳೋ ಹಾಗೆ ಅವ್ನೆ. ನಡೀಲಾ ಬೇಗ. ಪೋನ್ ಮಾಡ್ಲಾ 108ಕ್ಕೆ..................ಅಯ್ಯಯ್ಯೋ ಕಾಪಾಡ್ರೋ, ಇಲ್ಲಾಂದ್ರೆ ನಮ್ಮ ದೋಬಿ ರಂಗನ ವಂಸದ ಕುಡಿ ಹೋಯ್ತದೆ ಅಂತಾ ಕೂಗೋನು ಗೌಡಪ್ಪ.

Thursday, March 15, 2012

ಸೂಸೈಡ್ ಸ್ಪಾಟ್ - ಉಸಾರು


ಗೌಡ್ರೆ, ಇಲ್ಲಿಂದ ಬಿದ್ರೆ ಸಾಯ್ತಾರೇ ಅಂತೀರಾ.
-
ಏನೋಪಾ, ಅವರ ಹಣೆಲ್ಲಿ ಇದ್ದಂಗೆ ಸಾ. ನಿಮ್ಮ ಬಾಡಿ ನೋಡಿದ್ರೆ ಹಂಗೇ ಫ್ಲೈ ಆಗಿ ಲ್ಯಾಂಡ್ ಆಗೋ ಹಾಗೆ ಕಾಣುತ್ತೆ. ಆದರೆ ಕಳಗೆ ನೆಟ್ಟಗೆ ರಾಡ್ ಮಡಗವ್ರೆ, ಮಹಾಭಾರತ ಭೀಸ್ಮನ ತರಾ ಇರ್ತೀರಾ.
-
ಅಲ್ಲಾ ಅಕಸ್ಮಾತ್ ಬದುಕಿದರೆ
-
ತಿನ್ಸಕ್ಕೆ, ತೊಳೆಯಕ್ಕೆ, ಕೆರೆತಾವ ಹೋಗಕ್ಕೆ ಒಬ್ಬರನ್ನ ಮಡಿಕ್ಕ ಬೇಕಾಯ್ತದೆ ಸಾ.
-
ಹಂಗಂತೀರಾ....
ಹೌದು ನೀವು ಯಾರು ಸಾ?
-
ಲೇ ನಾನು ಪೊಲೀಸ್ ಇನ್ಸ್^ಪೆಕ್ಟರ್ ಕಲಾ. ಮೊನ್ನೆ ಇಬ್ಬರು ಬಿದ್ದವ್ರಂತೆ ಅದನ್ನ ಪರೀಕ್ಸೆ ಮಾಡುವ ಅಂತಾ ಬಂದಿದೀನಿ.
-
ಯಾವುದಕ್ಕೂ ಉಸಾರು ಸಾ. ಆಮ್ಯಾಕೆ ನಿಮ್ಮ ಬಾಡಿ ಇನ್ಸ್^ಪೆಕ್ಸನ್^ಗೆ ಮತ್ತೊಬ್ಬರು ಬರಬೇಕಾಯ್ತದೆ. ಯಾವುದಕ್ಕೂ ಬಾಡಿಗೆ ಹಗ್ಗ ಕಟ್ಕಳಿ. ಗಾಳಿ ಸಾನೇ ಐತೆ. ಸಿವನೇ ಸಂಭುಲಿಂಗ.
ಸಿವನ ಪಾದಕ್ಕೆ ದಾರಿ............ಬೋಲ್ಡು.







Wednesday, March 14, 2012

ಕವನ ಉಗಿಸ್ಕಂಡಿದ್ದು............

ಬಹಳ ದಿನ ಆದ್ ಮೇಲೆ ನಮ್ಮ ಗುರುಗಳಾದ ಚಂಪಾ, ಅನಂತಮೂರ್ತಿ, ರವಿ ಬೆಳಗೆರೆ ಎಲ್ಲಾರನ್ನೂ ನೋಡೋ ಭಾಗ್ಯ ಸಿಕ್ಕಿತ್ತು. ಎಲ್ಲಾರೂ ವೇದಿಕೆಯಲ್ಲಿ ಇದ್ದರು. ಅಷ್ಟೊತ್ತಿಗೆ ನನ್ನ ಹೆಸರು ಅನೌಂನ್ಸ್ ಆಯ್ತು. ಈಗ ಕೋಮಲ್ ರವರಿಂದ ಕವನ ವಾಚನ ಅಂದ್ರು. ನಂಗೋ ಖುಸಿನೋ ಖುಸಿ. ಹೋಗಿ ಎಲ್ಲಾರಿಗೂ ನಮಸ್ಕಾರ ಮಾಡ್ದೆ.
ಸಾಕ್ಸ್ ವಾಷನೆ ಬತ್ತಾ ಐತೆ ಅಂದೆ ಬೆಳಗೆರೆ ಸರ್^ಗೆ. ಹೂಂ ಕಣಪ್ಪಾ, ಮೂರು ಕಥೆ ಅನುವಾದ ಮಾಡೋ ತನಕ ತೆಗೆಯಲ್ಲಾ ಅಂತಾ ಸಪಥ ಮಾಡಿದ್ದೆ ಅಂದ್ರು.
ಚಂಪಾ ಸಾ, ನಿಮ್ಮ ಕಾಲ್ನಾಗೆ ಏನದು ಕಪ್ಪಗೆ ಅಂದೆ. ಅಯ್ಯೋ ಮುಂಡೇ ಮಗನೆ ಅದರ ಬಗ್ಗೆ ಆಮೇಲೆ ಹೇಳ್ತೀನಿ ಮೊದಲು ಕವನ ಬೊಗಳು. ಇನ್ನೂ ಮೂರು ಕಾರ್ಯಕ್ರಮ ಐತೆ, ಲೇಟಾಗಿ ಹೋದ್ರೆ ನನ್ನ ಹೆಂಡರು ಊಟನಾ ನಾಯಿಗೆ ಹಾಕಿರ್ತಾಳೆ. ನಾನು ಉಪವಾಸ ಮಕ್ಕೊ ಬೇಕಾಯ್ತದೆ ಅಂದ್ರು. ಅನಂತ ಮೂರ್ತಿಗಳೆ ಕಾಲ್ನಾಗೆ ಸಗಣಿ ಏನಾದ್ರೂ ತುಳಿದಿದ್ರಾ ಅಂದೆ. ಲೇ ಹೋಗೋ ಅಂತು.  ಆಯ್ತು ಗುರುಗಳೆ ಅಂದೆ. ಹೂಂ, ಹೂಂ, ಅಲ್ಲೇ ಇದ್ದೋನು, ಮಾತ್ರೆ, ನೀರು ಕೊಟ್ಟ. ಯಾಕ್ಲಾ. ಗಂಟಲ್ ಮೇ ಕಿಚ್ ಕಿಚ್ ಅಲ್ವಾ ಅಂದ. ನಿನ್ನ ಮಕ್ಕೆ, ತೆಗಿಲಾ ಸುಗರ್ ಐತೆ. ಆಮ್ಯಾಕೆ ಟಾಯ್ಲೆಟ್ ಗೆ ಹೋಗಬೇಕಾಯ್ತದೆ. ಅದು ಬೇರೆ ಸಾನೇ ರಸ್ ಐತೆ ಅಂದೆ. ಸುರುಹಚ್ಕಂಡೆ ನೋಡಿ.
-
-

-
ನನ್ನ ಪ್ರಿಯೆ ಬಂದಳು ಸೈಕಲ್ಲಿನ ಮೇಲೆ
ನಾನು ಕೂತಿದ್ದೆ ಸೈಜುಗಲ್ಲಿನ ಮೇಲೆ! ಇದನ್ನು ಎರಡು ಕಿತಾ ಓದ್ಕಳ್ಳಿ
ಸೈಕಲ್ಲಿಗೆ ಕ್ಯಾರಿಯರ್ ಇಲ್ಲ, ಮುಂಡೇ ಮಗಂದು ಬ್ರೇಕು ಇಲ್ಲ.
ಬಂಪರ್ ಇಲ್ಲ
ಬ್ಲೋ ಕಮ್ಮಿ ಐತೆ! ಸ್ಲೋ ಸೈಕಲ್ ರೇಸ್ ಇರಬೇಕು ಅಂದ್ರು ಬೆಳಗೆರೆ
ನನ್ನ ಪ್ರಿಯೆ ಬಂದಳು ಸೈಕಲ್ಲಿನ ಮೇಲೆ.........ಮುಂದೆ ಬೊಗಳೋ ಅಂತು ಚಂಪಾ
ಹೇಳ್ತೀನಿ ತಡ್ಕಳಿ ಸಾ.
ನಾ ಕೂತ ಸೈಜು ಗಲ್ಲು ಚೂಪಾಗಿತ್ತು
ಕಾದಿತ್ತು. ಬಿಸಿಲಿನಿಂದ...ಮತ್ತೆ ಬೆಂಕಿ ಹಾಕಕ್ಕೆ ಆಯ್ತದೇನ್ಲಾ ಅಂದ್ರು ಚಂಪಾ.
ತಳ ಸುಟ್ಟಿತ್ತು
ಅನ್ನ ಸೀದ ವಾಸ್ನೆ ಬತ್ತಾ ಇತ್ತು! ಏಥೂ
ನಾ ಕೂತಿದ್ದೆ ಸೂಜುಗಲ್ಲಿನ ಮೇಲೆ....ಮುಂದೆ ಬೊಗಳೋ, ಮೈಕಲ್ಲೇ ಹೊಡಿತೀನಿ ಅಂತು ಅನಂತು. ಅಪಭ್ರಂಷ ಮುಂಡೇದು ಅಂದ್ರು.
ತಡ್ಕಳ್ಳಿ ಸಾ
ಪ್ರಿಯೆ ಬಂದಳು
ಸೈಕಲ್ ಸ್ಟಾಂಡ್ ಹಾಕಿದಳು
ಪೆಡ್ಲ್ ಮಾತ್ರ ತಿರುಗುತ್ತಲೇ ಇತ್ತು. ಯಾಕಮ್ಮೀ
ಚೈನ್ ಕಳಚೈತೆ ಅಂತು. ಥೂ ಅಂತು ಬೆಳಗೆರೆ
ಮಗಂದು ಒಂದು ಕಡೆ ವಾಲಿತ್ತು
ಕಾರಣ ನಿಂತ ಸೈಕಲ್ಲ ಮೇಲೆ ಯಾರೋ ಕುಂತು ಹಿಂಗಾಗಿದೆ ಅಂದ್ಲು ಪ್ರಿಯೆ.
ಏನಿದು ಸೀದ ವಾಸ್ನೆ,.
ತಳ ಸುಟ್ಟೈತೆ ಅಂದೆ. ಓಹ್ ನೈಸ್^ನಾ!
ಪ್ರಿಯೆ ನಿನಗಾಗಿ ಕಾದಿದ್ದೆ
ನೀ ಬಂದೆ
ಹೊಂಡು ಮತ್ತೆ
ಎಲ್ಲಿಗೆ
ಸೈಕಲ್ ಸಾಪಿಗೆ, ಯಾಕೆ ಪ್ರಿಯೆ
ಇದು ಬಾಡಿಗೆ ಸೈಕಲ್, ಕಾಸು ಕೊಡಬೇಕು.
ಮತ್ತೆ ಇದು ಯಡೂರಪ್ಪನ ಸೈಕಲ್ ಅಲ್ಲವಾ.
ಅದೇ, ಆದರೆ ಬಾಡಿಗೆಗೆ ಬಿಟ್ಟಿದಾರೆ......ಲೇ ಇದು ಏನು ಕವನನೋ, ನಿನ್ನ ಮಕ್ಕೆ ಹಳೇ ಎಕ್ಕಡ ಹಾಕ. ಇನ್ನೊಂದು ಕಿತಾ ಕಾಣಿಸ್ಕೊ ಆಮ್ಯಾಕೆ ಮಗನೇ ಹಾಯ್ ಬೆಂಗಳೂರಲ್ಲಿ ಬತ್ತೀಯಾ ಅಂದ್ರು ಬೆಳಗೆರೆ. ನಾವು ಬೆಳೆಯೋದು ಯಾರಿಗೂ ಇಷ್ಟ ಇಲ್ಲ ಬುಡಿ. ಅಂದು ಮನೆಗೆ ಬಂದೆ.